Sunday, December 18, 2011

ಯಡ್ಡಿಯಂಥ ನಿರ್ಲಜ್ಜ ರಾಜಕಾರಣಿ ಕಂಡಿಲ್ಲ : ದೊರೆಸ್ವಾಮಿ







ಬೆಂಗಳೂರು, ಡಿ. 17 : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಂಥ ನಿರ್ಲಜ್ಜ, ಅಧೋಗತಿಗಿಳಿದಿರುವ, ಅಸಹ್ಯಕರ ರಾಜಕಾರಣಿಯನ್ನು ನಾನು ಕಂಡಿಲ್ಲ, ಈ ನಾಡೂ ಕಂಡಿಲ್ಲ ಎಂದು 94 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಎಚ್ಎಸ್ ದೊರೆಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಉಳಿಸಿ, ಜನಾಧಿಕಾರ ಉಳಿಸಿ ಆಂದೋಲನದ ಭಾಗವಾಗಿ ನಗರದ ಫ್ರೀಡಂ ಪಾರ್ಕಿನಲ್ಲಿ ಸೇರಿದ್ದ ಹದಿನೈದು ಸಹಸ್ರ ಜನರನ್ನುದ್ದೇಶಿಸಿ ಸ್ಫೂರ್ತಿಯುತವಾಗಿ ಭಾಷಣ ಮಾಡಿದ ದೊರೆಸ್ವಾಮಿಯವರು ಯುವಕರು ಉತ್ಸಾಹದಿಂದ ಪುಟಿದೇಳುವಂತೆ ಮಾತಿನ ಪ್ರವಾಹ ಹರಿಸಿದರು. ಲೋಕಾಯುಕ್ತ ವರದಿಯಲ್ಲಿರುವಂತೆ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಯಡಿಯೂರಪ್ಪ ಕೆಲ ದಿನ ಜೈಲಿಗೆ ಹೋಗಿ ಬಂದಿದ್ದಾರೆ. ಬಂದವರೇ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆಯವರ ವಿರುದ್ಧ ಅಸಹ್ಯಕರವಾಗಿ ಮಾತನಾಡುತ್ತಿದ್ದಾರೆ. ಇಂಥವರಿಂದ ಜನ ಏನು ತಾನೆ ನಿರೀಕ್ಷಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದರು. ಭ್ರಷ್ಟಾಚಾರದ ವಿರುದ್ಧ ಹೋರಾಡಲು ಲೋಕಾಯುಕ್ತ ಸಂಸ್ಥೆಯೇ ಜನರ ಶಕ್ತಿ. ಲೋಕಾಯುಕ್ತ ನೇಮಕವಾಗುವವರೆಗೆ ನಾವು ಸುಮ್ಮನಿರಬಾರದು. ಎಲ್ಲರೂ ಕೂಡಿ ಹೋರಾಡೋಣ. ಜಿಲ್ಲೆಜಿಲ್ಲೆಯಲ್ಲಿಯೂ ಲೋಕಾಯುಕ್ತ ನೇಮಕಕ್ಕೆ ಆಂದೋಲನ ನಡೆಸೋಣ. ಕೂಡಲೆ ಲೋಕಾಯುಕ್ತರನ್ನು ನೇಮಕ ಮಾಡಲು ಸರಕಾರಕ್ಕೆ ಮನವಿಯನ್ನು ಸಲ್ಲಿಸೋಣ ಎಂದು ಜನತೆಗೆ ಕರೆ ನೀಡಿದರು.

No comments:

Post a Comment