Friday, June 22, 2012

ರಾಯಲ್ ಎನ್ ಫೀಲ್ಡ್ ಬೈಕ್ ಭಾರತಕ್ಕೆ ಬಂದದ್ದು ಹೀಗೆ.


ರಾಯಲ್ ಎನ್ ಫೀಲ್ಡ್ ಬೈಕ್ ಇಷ್ಟವಾಗಲು ಎಷ್ಟು ಕಾರಣವಾದರೂ ಕೊಡಬಹುದು. ಅದರ ಸದ್ದು, ರಾಜಗಾಂಭಿರ್ಯ, ಗತ್ತು, ವಿನ್ಯಾಸ, ಬೃಹತ್ ಆಕೃತಿ ಎಲ್ಲವೂ ಎಲ್ಲರಿಗೂ ಇಷ್ಟ. ಇದೇ ಕಾರಣಕ್ಕೆ ಹೆಚ್ಚಿನವರಿಗೆ ಬುಲೆಟ್ ಅಂದ್ರೆ ಪಂಚ ಪ್ರಾಣ. ಈಗ ಭಾರತದಲ್ಲಿ ಹತ್ತು ಹಲವು ವಿನೂತನ ಮಾದರಿಗಳ ಎನ್ ಫೀಲ್ಡ್ ಬೈಕ್ ಗಳು ದೊರಕುತ್ತಿವೆ. ಆದರೆ ಈ ಬುಲೆಟ್ ಭಾರತಕ್ಕೆ ಬಂದದ್ದು ಎಲ್ಲ ಬೈಕ್ ಗಳಂತೆ ಅಲ್ಲ!

ಭಾರತಕ್ಕೆ ಎನ್ ಫೀಲ್ಡ್ ರಾಜಗತ್ತಿನಿಂದ ಬಂದಿತ್ತು. ಸ್ವಾತಂತ್ರ್ಯ ಸಿಕ್ಕ ನಂತರ 1955ರ ಸಮಯದಲ್ಲಿ ಭಾರತ ಸರಕಾರ ಪೋಲಿಸ್ ಮತ್ತು ಸೇನಾ ಅವಶ್ಯಕತೆಗೆ ಸೂಕ್ತವಾದ ಬೈಕೊಂದರ ಹುಡುಕಾಟದಲ್ಲಿತ್ತು. ಆಗ ದೇಶದ ಕಣ್ಣಿಗೆ ಬಿದ್ದದ್ದು ಇಂಗ್ಲೆಂಡ್ ನ ಎನ್ ಫೀಲ್ಡ್. ಗಡಿಯಲ್ಲಿ ಸೈನಿಕರು ಪಹರೆ ಕಾಯಲು, ಸೇನಾ ಅವಶ್ಯಕತೆಗೆ ಸೂಕ್ತವಾಗಿತ್ತು ಈ ಬುಲೆಟ್.  ಅದಕ್ಕಾಗಿ ಭಾರತ 500ಸಿಸಿ ಸಾಮರ್ಥ್ಯದ ಸುಮಾರು 800 ಬುಲೆಟ್ ಗಳಿಗೆ ಆರ್ಡರ್ ಮಾಡಿತ್ತು. ಹೀಗೆ ಸೈನಿಕ ಅವಶ್ಯಕತೆಗಾಗಿ ಬುಲೆಟ್ ಭಾರತಕ್ಕೆ ಪ್ರವೇಶಿಸಿತ್ತು.

ಆದರೆ ಮತ್ತೆ ಭಾರತ ಇನ್ನಷ್ಟು ಬುಲೆಟ್ ಬೈಕ್ ಬೇಕೆಂದು ಆರ್ಡರ್ ಮಾಡಿತ್ತು. ಭಾರತದ ಬೇಡಿಕೆಯನ್ನು ಪೂರೈಸುವುದು ಕಷ್ಟ ಎಂಬುದನ್ನು ಮನಗಂಡ
ಕಂಪನಿ ಭಾರತದಲ್ಲಿಯೇ ಉತ್ಪಾದಿಸುವ ಆಶಯ ವ್ಯಕ್ತಪಡಿಸಿತ್ತು. ಇದಕ್ಕೆ ಭಾರತದಿಂದ ಒಪ್ಪಿಗೆ ದೊರಕಿತು. ಪರಿಣಾಮವಾಗಿ ಮದ್ರಾಸ್ ಮೋಟರ್ ನೊಂದಿಗಿನ ಸಹಭಾಗಿತ್ವದಲ್ಲಿ ಎನ್ ಫೀಲ್ಡ್ ಇಂಡಿಯಾ ಎಂಬ ಕಂಪನಿ ಆರಂಭಿಸಿತ್ತು. ಭಾರತದ ಕಂಪನಿಗೆ ರಾಯಲ್ ಎನ್ ಫೀಲ್ಡ್ ಎಂಬ ಹೆಸರು ಬಳಕೆ ಮಾಡುವ ಹಕ್ಕು ದೊರಕಿದ್ದು 1995ರಲ್ಲಿ. ಹೀಗೆ 350 ಸಿಸಿ ಬೈಕ್ ಗಳಿಗೆ ಪರವಾನಿಗೆ ಪಡೆದು ಭಾರತದಲ್ಲಿ ಕಂಪನಿ ಉತ್ಪಾದನೆ ಆರಂಭಿಸಿ ದೇಶದ ರಸ್ತೆಯ ರಾಜನಾಗಿ ಮೆರೆಯಿತು. ಮತ್ತೆ ಈ ರಾಜಾ ಬೈಕ್ ಹಿಂತುರುಗಿ ನೋಡಲೇ ಇಲ್ಲ. ಇಂದಿನವರೆಗೂ ಒಂದಿಷ್ಟು ಗಾಂಭಿರ್ಯ ಕಳೆದುಕೊಳ್ಳದೇ ರೈಡ್ ಮಾಡುತ್ತಲೇ ಇದೆ.


No comments:

Post a Comment