Friday, July 20, 2012

"ರಾಜೇಶ್ ಖನ್ನಾ" ಚಿತೆ ಆರುವ ಮುನ್ನವೇ ಗೆಳತಿಯ ನೋಟೀಸು.



ಬಾಲಿವುಡ್ ಸೂಪರ್ ಸ್ಟಾರ್ ರಾಜೇಶ್ ಖನ್ನಾ ವಿಧಿವಶರಾದ ಬಳಿಕ ಅವರ ಕೊನೆಯಾಸೆಯಂತೆ ಅವರ 'ಆಶೀರ್ವಾದ್' ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡಲಾಗುತ್ತಿದೆ. ಪಶ್ಚಿಮ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ಸಮುದ್ರಾಭಿಮುಖವಾಗಿ ಈ ಬಂಗಲೆ ಇದೆ.
ತನ್ನ ನಿಧನದ ನಂತರ ಈ ಬಂಗಲೆ ವಸ್ತುಸಂಗ್ರಹಾಲಯವಾಗಬೇಕು ಎಂದು ಖನ್ನಾ ಬಯಸಿದ್ದರು. ಗುರುವಾರವಷ್ಟೇ ಅವರ (ಜು.19) ಅಂತ್ಯಕ್ರಿಯೆ ನೆರವೇರಿತು. ಇನ್ನೂ ಅವರ ಚಿತೆ ಆರಿಲ್ಲ, ಅಷ್ಟರಲ್ಲಾಗಲೇ ಖನ್ನಾ ಜೊತೆಗೆ ಲಿವ್ ಇನ್ ಸಂಬಂಧ ಇಟ್ಟುಕೊಂಡಿದ್ದ 'ಮುಸ್ಸಂಜೆ' ಗೆಳೆತಿ ಲೀಗಲ್ ನೋಟೀಸು ರವಾನಿಸಿದ್ದಾರೆ.
ರಾಜೇಶ್ ಖನ್ನಾ ಬಾಳಿ ಬದುಕಿದ 'ಆಶೀರ್ವಾದ್' ಬಂಗಲೆ ತನಗೆ ಸೇರಬೇಕಾದದ್ದು ಎಂದು ಅನಿತಾ ಅದ್ವಾನಿ ಎಂಬುವವರು ಲೀಗಲ್ ನೋಟೀಸ್ ಜಾರಿ ಮಾಡಿದ್ದಾರೆ. ಖನ್ನಾ ಕಾಕಾ ಅವರ ಸಂಧ್ಯಾಕಾಲದಲ್ಲಿ ಅವರ ಜೊತೆಗಿದ್ದು ಕೊನೆಯ ಕಾಲದಲ್ಲಿ ಅವರಿಗೆ ಆಸರೆಯಾಗಿದ್ದರು ಅನಿತಾ.
ಕೌಟಂಬಿಕ ದೌರ್ಜನ್ಯ ಕಾಯಿದೆ ಪ್ರಕಾರ ಖನ್ನಾ ಕುಟುಂಬಿಕರಿಗೆ ಲೀಗಲ್ ನೋಟೀಸ್ ಜಾರಿ ಮಾಡಿದ್ದಾರೆ. ಕಳೆದ ಒಂದು ತಿಂಗಳಿಂದ ಅನಿತಾರನ್ನು ಆಶೀರ್ವಾದ ಬಂಗಲೆಯಿಂದ ಹೊರದಬ್ಬಲು ಖನ್ನಾ ಕುಟುಂಬಿಕರು ಕಿರುಕುಳ ನೀಡುತ್ತಿದ್ದರು ಎಂಬ ಸುದ್ದಿಯೂ ಇದೆ.
ಕಳೆದ ಎಂಟು ವರ್ಷಗಳಿಂದ ಖನ್ನಾ ಅವರೊಂದಿಗೆ ಅನಿತಾ ಅದ್ವಾನಿ ಸಹ ಬಾಳ್ವೆ ನಡೆಸುತ್ತಿದ್ದರು. ಹಾಗಾಗಿ ಈ ಮನೆಯ ಮೇಲೆ ತಮಗೂ ಹಕ್ಕಿದೆ ಎಂದು ಮೃದುಲಾ ಕದಮ್ ಎಂಬ ವಕೀಲರಿಂದ ಖನ್ನಾ ಕುಟುಂಬಿಕರಿಗೆ ಲೀಗಲ್ ನೋಟೀಸ್ ಕಳುಹಿಸಿದ್ದಾರೆ.
ಖನ್ನಾ ಕುಟುಂಬಿಕರು ಹಾಗೂ ಅನಿತಾ ನಡುವೆ ಮುಸುಕಿನ ಗುದ್ದಾಟ ಬಹಳ ದಿನಗಳಿಂದಲೂ ನಡೆಯುತ್ತಿತ್ತಂತೆ. ಮೊನ್ನೆ ಅವರ ನಿಧನದ ಬಳಿಕ ಈ ಕುಟುಂಬ ಕಲಹ ಬೀದಿಗೆ ಬಿದ್ದಿದೆ. ಆಗಲೇ ಖನ್ನಾ ಹಾಗೂ ಈಕೆಯ ನಡುವಿನ ಸಂಬಂಧ ಜಗಜ್ಜಾಹೀರಾಗಿತ್ತು.
ಸಾಕಷ್ಟು ದಿನ ಖನ್ನಾ ಅವರಿಂದ ದೂರವಿದ್ದ ಡಿಂಪಲ್ ಕಪಾಡಿಯಾ, ಅಕ್ಷಯ್ ಕುಮಾರ್, ಟ್ವಿಂಕಲ್ ಹಾಗೂ ರಿಂಕಿ ಅವರು ಖನ್ನಾ ಅವರ ಕೊನೆಯ ದಿನಗಳಲ್ಲಿ ಅವರಿಗೆ ಹತ್ತಿರವಾಗಿದ್ದರು. ಕಳೆದ ಹತ್ತು ವರ್ಷಗಳಿಂದ ತಾವು ಈ ಮನೆಯಲ್ಲಿದ್ದೇನೆ ಎಂದಿರುವ ಅನಿತಾ, ತಮ್ಮ ಕೊನೆ ದಿನಗಳಲ್ಲಿ 'ಕಾಕಾಜಿ' ಅವರು ಸ್ಮರಣಶಕ್ತಿ ಶಕ್ತಿ ಕಳೆದುಕೊಂಡಿದ್ದರು.
ಒಮ್ಮೊಮ್ಮೆ ನನ್ನನೂ ಗುರುತು ಹಿಡಿಯುತ್ತಿರಲಿಲ್ಲ. ಅವರ ಮನೆಯವರು ಬಂದರೆ ಅವರನ್ನು ಹೊರಗೆ ತಳ್ಳುತ್ತಿದ್ದರು. ಅವರ ಕುಟುಂಬದವರೊಂದಿಗೂ ಮಾತನಾಡುತ್ತಿರಲಿಲ್ಲ. ಕಡೆ ದಿನಗಳಲ್ಲಿ ನನನ್ನೂ ದೂರ ಮಾಡುತ್ತಿದ್ದರು. ಈಗ ಅವರಿಲ್ಲದ ನೋವು ನನ್ನನ್ನು ತೀವ್ರವಾಗಿ ಬಾಧಿಸುತ್ತಿದೆ. ಈಗ ಅವರಿಲ್ಲ. ನಾನು ಎಲ್ಲಿಗೆ ಹೋಗಲಿ? ಎಂದು 'ಮಿಡ್ ಡೇ' ಪತ್ರಿಕೆ ಜೊತೆಗೆ ಅನಿತಾ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

No comments:

Post a Comment