Sunday, December 18, 2011

ಅಂಥಾದ್ದೇನೈತಿ ಅಂತೀರಾ ಈ ಕ್ರಿಸ್ಮಸ್ ಗಿಡದಾಗ! ಬರಿ ಬಂಗಾರ .ಕಂಡ್ರೀ.




ಕ್ರಿಸ್ಮಸ್ ಹಬ್ಬದಿಂದ ಜನರಿಗೆ ಸುವಾರ್ತೆ ಮುಟ್ಟಿದೆ----ಅದೇ ಅಲ್ಲವೆ ಬೇಕಾಗಿದ್ದು- ಪರಿಹಾರ ಓದುಗರಿಗೆ ಕ್ರಿಸ್ಮಸ ಹಬ್ಬದ ಹಾರ್ದಿಕ ಶುಭಕಾಮನೆಗಳು . ಜಗತ್ತಿನ ಪ್ರತಿ ಚರ್ಚ್, ಕ್ರಿಶ್ಚಿಯನ್ನರ ಮನೆಗಳಲ್ಲಿ ಕ್ರಿಸ್ಮಸ್ ಸಂದರ್ಭದಲ್ಲಿ ಕ್ರಿಸ್ಮಸ್ ಗಿಡವನ್ನು ನೆಡದೆ ಹಬ್ಬವನ್ನು ಆಚರಿಸುವುದೇ ಇಲ್ಲ. ವಿಭಿನ್ನ ಬಣ್ಣದ ಲೈಟು, ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿ ಅದನ್ನು ಮುಟ್ಟಿ ಕಣ್ತುಂಬಿಕೊಳ್ಳುವವರೇ ಎಲ್ಲ. ಕ್ರಿಸ್ಮಸ್ ಗಿಡ ಹಬ್ಬಕ್ಕೊಂದು ಶೋಭೆ. ಆದರೆ ಜಪಾನಿಲ್ಲಿ ನೆಟ್ಟಿರುವ ಅಲ್ಲ, ತಯಾರಿಸಲಾಗಿರುವ ಕ್ರಿಸ್ಮಸ್ ಗಿಡ ವಿಭಿನ್ನ ಕಾರಣದಿಂದ ಸುದ್ದಿಯಾಗಿದೆ.ಭೂಮಿಯ ಎಲ್ಲೆಲ್ಲೂ ಆ ಗಿಡದ್ದೇ ಮಾತುಕತೆ. ಏನೈತಿ ಅದರಲ್ಲಿ ಅಂಥಾದ್ದೇನೈತಿ ಅಂತೀರಾ? ಚಿನ್ನ ಅಂದರೆ ಬಾಯಿಬಾಯಿ ಬಿಡುವವರು ಬಾಯಿಬಿಟ್ಟೇ ಇರುವಂತೆ ಇಡೀ ಗಿಡವನ್ನು ಬಂಗಾರದಲ್ಲಿ ಸೃಷ್ಟಿಸಲಾಗಿದೆ. ಇದನ್ನು ತಯಾರಿಸುವವರ ಹುಚ್ಚು ಅಂದರೂ ಪರವಾಗಿಲ್ಲ. ಆದರೆ, ಬಾಗದಿದ್ದರೂ ಬೀಗುತ್ತಿರುವ ಗಿಡ ಮಾತ್ರ ಜಗತ್ತಿನ ಅತ್ಯಂತ ದುಬಾರಿ ಕ್ರಿಸ್ಮಸ್ ಗಿಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವರ್ಷದ ಮತ್ತು ಪ್ರಪಂಚದ ಅತ್ಯಂತ ದುಬಾರಿ ಕ್ರಿಸ್ಮಸ್ ಗಿಡವನ್ನು ಜಪಾನಿನ ಚಿನ್ನಾಭರಣ ತಯಾರಕರಾದ ಜಿಂಝಾ ಟನಕ ರೂಪಿಸಿದ್ದಾರೆ. ಸತತ ಹತ್ತು ವರ್ಷಗಳಿಂದ ಈ ಕ್ರಿಸ್ಮಸ್ ಗಿಡದ ತಯಾರಿ ನಡೆದಿದ್ದು, ಈ ವರ್ಷ ಪ್ರದರ್ಶನಕ್ಕೆ ಇಡಲಾಗಿದೆ. ಯಾರೂ ಮನಸಿನಲ್ಲಿಯೂ ಊಹಿಸಿಕೊಳ್ಳಲು ಸಾಧ್ಯವಿಲ್ಲದ್ದಷ್ಟು ಅಲಂಕಾರದೊಂದಿಗೆ ಗಿಡ ರಚಿತವಾಗಿದೆ. ಈ ಕ್ರಿಸ್ಮಸ್ ಗಿಡದಲ್ಲಿ ಏನಂಥ ವಿಶೇಷ? ಇದನ್ನು ಅಪ್ಪಟ 24 ಕ್ಯಾರಟ್ ಚಿನ್ನದಿಂದ ಈ ಗಿಡವನ್ನು ರೂಪಿಸಲಾಗಿದೆ. ಕೋಟ್ಯಂತರ ರುಪಾಯಿ ಬೆಲೆ ಬಾಳುವ ಈ ಗಿಡ 2.4 ಮೀಟರ್ ಉದ್ದ, 12 ಕಿಲೋ ಗ್ರಾಂ ತೂಕವಿದೆ. ಪ್ಲೇಟ್, ಹೃದಯಾಕಾರ, ರಿಬ್ಬನ್ ಗಳಿಂದ ಟ್ರೀ ಅಲಂಕೃತಗೊಂಡಿದೆ. ಎಲ್ಲವೂ ಚಿನ್ನದಲ್ಲೇ ಇದೆ. ಈ ಚಿನ್ನದ ಗಿಡದ ನಿಖರ ಬೆಲೆ 2 ಮಿಲಿಯನ್ ಡಾಲರ್. ಯಪ್ಪೋ! ಈ ರೀತಿ ದುಬಾರಿ ವಸ್ತುಗಳನ್ನು ಜಿಂಝಾ ತಯಾರಿಸಿರುವುದು ಇದೇ ಮೊದಲಲ್ಲ. ಜಪಾನಿನ ರಾಜಕುಮಾರ ಹುಟ್ಟಿದ ಸಂದರ್ಭದಲ್ಲೂ 24 ಕ್ಯಾರಟ್ ಚಿನ್ನದ ಕುದುರೆಯನ್ನು ತಯಾರಿಸಿ ಆಶ್ಚರ್ಯ ಉಂಟು ಮಾಡಿದ್ದರು. ಹೂವಿನ ಅಲಂಕಾರ ಮಾಡುವ ಕಲಾವಿದ ಶೋಗೊ ಕಾರಿಯಾಝಾಕಿ ಸಹಯೋಗದೊಂದಿಗೆ ಈ ಬಾರಿ ಅಲಂಕಾರಿಕ ಚಿನ್ನದ ಗಿಡವನ್ನು ತಯಾರಿಸಿರುವುದಾಗಿ ಜಿಂಝಾ ತಿಳಿಸಿದ್ದಾರೆ. 2010ರಲ್ಲಿ ತಯಾರಿಸಲಾಗಿದ್ದ ಚಿನ್ನದ ಕ್ರಿಸ್ಮಸ್ ಗಿಡದಲ್ಲಿ ಸುಮಾರು 60 ಹೃದಯಾಕಾರದ ಅಲಂಕಾರಿಕ ವಸ್ತುಗಳಿದ್ದು, ಗಿಡ 1.3 ಮೀಟರ್ ಉದ್ದವಿತ್ತು. ಅಬುಧಾಬಿಯ ಸೆವೆನ್ ಸ್ಟಾರ್ ಹೋಟೆಲ್ ನಲ್ಲಿ ಪ್ರದರ್ಶನಕ್ಕಿಟ್ಟಿದ್ದ ಈ ಗಿಡ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಜಪಾನಿನ ಚಿನ್ನದ ಕ್ರಿಸ್ಮಸ್ ಗಿಡ ಅಬುಧಾಬಿಯ ಬಂಗಾರದ ಗಿಡವನ್ನು ಹಿಂದಕ್ಕಿಕ್ಕಿ ವರ್ಷದ ಅತ್ಯಂತ ದುಬಾರಿ ಕ್ರಿಸ್ ಮಸ್ ಗಿಡವೆಂಬ ಖ್ಯಾತಿಗೆ ಪಾತ್ರವಾಗಿದೆ.
ಕ್ರಿಸ್ಮಸ್ ಹಬ್ಬದಿಂದ ಜನರಿಗೆ ಸುವಾರ್ತೆ ಮುಟ್ಟಿದೆ----ಅದೇ ಅಲ್ಲವೆ ಬೇಕಾಗಿದ್ದು- ಪರಿಹಾರ ಓದುಗರಿಗೆ ಕ್ರಿಸ್ಮಸ ಹಬ್ಬದ ಹಾರ್ದಿಕ ಶುಭಕಾಮನೆಗಳು .

No comments:

Post a Comment