Saturday, November 5, 2011

ನನ್ನ ಪ್ರೀತಿಯ ಹಾಡುಗಾರ ಹಾಡುಹಕ್ಕಿ ಭೂಪೇನ್ ಹಜಾರಿಕಾ ಚಿರನಿದ್ರೆಗೆ



ಮುಂಬೈ, ನ. 5 : ಹಿನ್ನೆಲೆ ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ, ಕವಿಯಾಗಿ, ಬರಹಗಾರನಾಗಿ, ಸಿನೆಮಾ ನಿರ್ದೇಶಕನಾಗಿ ಸಂಗೀತ ಮತ್ತು ಸಿನೆಮಾ ಕ್ಷೇತ್ರಗಳನ್ನು ವ್ಯಾಪಿಸಿಕೊಂಡಿದ್ದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ, ಚಿತ್ರರಂಗದ ದಿಗ್ಗಜ ಡಾ. ಭೂಪೇನ್ ಹಜಾರಿಕಾ(85) ಮುಂಬೈನಲ್ಲಿ ಅಸುನೀಗಿದ್ದಾರೆ. ಹೈಯಾ ನಾ ಹೈಯಾ ನಾ ಹೈಯಾ ನಾ ಹೈಯಾ ನಾ... ಹಾಡಿನಲ್ಲಿ ಹುದುಗಿದ್ದ ಆಸ್ಸಾಂ ಹಾಡುಹಕ್ಕಿಯ ವಿಶಿಷ್ಟ ಕಂಠವನ್ನು ಇನ್ನು ಕ್ಯಾಸೆಟ್, ಸಿಡಿಗಳಲ್ಲಿ ಮಾತ್ರ ಕೇಳಲು ಸಾಧ್ಯ. ಮೂತ್ರಪಿಂಡದ ವೈಫಲ್ಯದಿಂದ ಬಳಲುತ್ತಿದ್ದ ಭೂಪೇನ್ ಹಜಾರಿಕಾ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಶನಿವಾರ ಸಂಜೆ 4.30ಕ್ಕೆ ಕಣ್ಣುಮುಚ್ಚಿದರು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಪದ್ಮ ಭೂಷಣ, ಆಸೋಮ್ ರತ್ನ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳನ್ನು ಅವರು ಪಡೆದಿದ್ದರು. ಕಲ್ಪನಾ ಲಾಜ್ಮಿ ನಿರ್ದೇಶದ ರುಡಾಲಿ ಚಿತ್ರಕ್ಕಾಗಿ ಅವರು ಏಷ್ಯಾ ಪೆಸಿಫಿಕ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದಿದ್ದರು. ಲತಾ ಮಂಗೇಶ್ಕರ್ ಅವರ ಅದ್ಭುತ ಕಂಠದಿಂದ ಹೊರಹೊಮ್ಮಿದ 'ರುಡಾಲಿ' ಚಿತ್ರದ 'ದಿಲ್ ಹುಮ್ ಹುಮ್ ಕರೆ...' ಹಾಡು ಭೂಪೇನ್ ಹಜಾರಿಕಾ ಅವರನ್ನು ಸಂಗೀತ ಕ್ಷೇತ್ರದಲ್ಲಿ ಅಮರರನ್ನಾಗಿಸಿದೆ. ಅವರ ಉಸಿರು ನಿಂತಿದ್ದರೂ ದಿಲ್(ಹೃದಯ) ಯಾವತ್ತಿಗೂ ಹುಮ್ ಹುಮ್ ಅಂತ ಅನ್ನುತ್ತಲೇ ಇರುತ್ತದೆ.

No comments:

Post a Comment