ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರದ ಬಳಿ ಇರುವ ಚಿನ್ನದ ಬೆಲೆಯು ಕಳೆದ ಎರಡು ವರ್ಷಗಳಲ್ಲಿ ರೂ 1 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಚಿನ್ನದ ಬೆಲೆಯಲ್ಲಿನ ತೀವ್ರ ಹೆಚ್ಚಳ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) 2009ರ ನವೆಂಬರ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 200 ಟನ್‌ಗಳಷ್ಟು ಚಿನ್ನ ಖರೀದಿಸಿದ್ದರಿಂದ ಸರ್ಕಾರದ ಸಂಪತ್ತು ಗಮನಾರ್ಹ ಪ್ರಮಾಣದಲ್ಲಿ ವೃದ್ಧಿಯಾಗಿದೆ. `ಐಎಂಎಫ್`ನಿಂದ ಖರೀದಿಸಿದ ಚಿನ್ನದ ಮೊತ್ತ ರೂ 30 ಸಾವಿರ ಕೋಟಿಗಳಷ್ಟು ಹೆಚ್ಚಳಗೊಂಡಿದೆ. `ಆರ್‌ಬಿಐ` ಚಿನ್ನ ಖರೀದಿಸುವಾಗ ಪ್ರತಿ 10 ಗ್ರಾಂ ಚಿನ್ನದ ಬೆಲೆ ರೂ 15 ಸಾವಿರದಷ್ಟಿತ್ತು. ತನ್ನ ವಿದೇಶ ವಿನಿಮಯ ಮೀಸಲಿಗೆ ಅನುಗುಣವಾಗಿ ಆರ್‌ಬಿಐ ಸರ್ಕಾರದ ಪರವಾಗಿ ಚಿನ್ನವನ್ನು ತನ್ನ ಬಳಿ ಸಂಗ್ರಹಿಸಿ ಇಟ್ಟುಕೊಳ್ಳುತ್ತದೆ. ಸದ್ಯಕ್ಕೆ ಕೇಂದ್ರೀಯ ಬ್ಯಾಂಕ್ನ ಬಳಿ 557.7 ಟನ್ಗಳಷ್ಟು ಚಿನ್ನ ಇದೆ. ಈಗ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂಗಳ ಚಿನ್ನದ ಬೆಲೆ ರೂ 29 ಸಾವಿರದ ಆಸುಪಾಸಿನಲ್ಲಿ ಇದೆ. ಈ ಬೆಲೆ ಆಧರಿಸಿ ಹೇಳುವುದಾದರೆ, `ಆರ್‌ಬಿಐ` ಬಳಿ ಇರುವ ಚಿನ್ನದ ಬೆಲೆ ರೂ 1,60,000 ಕೋಟಿಗಳಷ್ಟಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಇನ್ನಷ್ಟು ಚಿನ್ನ ಖರೀದಿಸುವ ಅಗತ್ಯ ಇದೆ ಎಂದೂ ಕೇಂದ್ರೀಯ ಬ್ಯಾಂಕ್‌ನ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ. ಚಿನ್ನ ಖರೀದಿಯು ಬ್ಯಾಂಕ್‌ನ ವಿವಿಧ ಉದ್ದೇಶಗಳ ಕಾರ್ಯತಂತ್ರದ ಭಾಗವಾಗಿದ್ದು, ಜಾಗತಿಕವಾಗಿಯೂ ಇಂತಹ ಪ್ರವೃತ್ತಿ ರೂಢಿಯಲ್ಲಿ ಇದೆ. ಈಗಲೂ `ಆರ್‌ಬಿಐ` ತನ್ನ ಚಿನ್ನದ ಸಂಗ್ರಹ ಹೆಚ್ಚಿಸಿಕೊಳ್ಳುವ ಅವಕಾಶ ಇದೆ. 2009ರಲ್ಲಿ `ಐಎಂಎಫ್`ನಿಂದ ಚಿನ್ನ ಖರೀದಿಸಿದ ನಂತರ ಮತ್ತೆ ಚಿನ್ನ ಖರೀದಿಸಲಾಗಿಲ್ಲ ಎಂದು `ಆರ್‌ಬಿಐ` ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.ವಿಶ್ವ ಚಿನ್ನ ಮಂಡಳಿಯ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಸರ್ಕಾರದ ಬಳಿ ಇರುವ 557.7 ಟನ್‌ಗಳಷ್ಟು ಚಿನ್ನದ ಪ್ರಮಾಣ ಆಧರಿಸಿ ಹೇಳುವುದಾದರೆ ಭಾರತ ವಿಶ್ವದ 10ನೇ ಅತಿ ದೊಡ್ಡ ದೇಶವಾಗಿದೆ. ಆದರೆ, ಇದು ದೇಶದ ಒಟ್ಟಾರೆ ವಿದೇಶಿ ವಿನಿಮಯ ಸಂಗ್ರಹದ ಕೇವಲ ಶೇ 9ರಷ್ಟಿದೆ. ಅಮೆರಿಕ ಸರ್ಕಾರದದ ಬಳಿ 8,133.5 ಟನ್ಗಳಷ್ಟು ಚಿನ್ನ ಇದೆ. ಇದು ಒಟ್ಟು ವಿದೇಶಿ ವಿನಿಮಯ ಸಂಗ್ರಹದ ಶೇ 75.5ರಷ್ಟಿದೆ.ಸದ್ಯಕ್ಕೆ ಚಿನ್ನದ ಬೆಲೆಯು ತಲಾ 10 ಗ್ರಾಂಗಳಿಗೆ ರೂ 28,600ದಿಂದ ರೂ 29 ಸಾವಿರದವರೆಗೆ ಇದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ಗೆ 1720 ಡಾಲರ್‌ಗಳಷ್ಟಿದೆ.ಜುಲೈ - ಸೆಪ್ಟೆಂಬರ್ ಅವಧಿಯಲ್ಲಿ ಜಾಗತಿಕ ಚಿನ್ನದ ಬೇಡಿಕೆಯು ಶೇ 6ರಷ್ಟು ಹೆಚ್ಚಳವಾಗಿದೆ.
No comments:
Post a Comment