ಕುಡುಕರಿಗೆ ಸಾರ್ವಜನಿಕವಾಗಿ ಥಳಿಸಿ ಅವಮಾನಗೊಳಿಸಿದಲ್ಲಿ ಕುಡಿತದ ಚಟದಿಂದ ಹೊರಬರಬಹುದು ಎಂದು ಹಿರಿಯ ಗಾಂಧಿವಾದಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹೇಳಿದ್ದಾರೆ. ಅಣ್ಣಾ ಹಜಾರೆ ಟಿವಿ ಸುದ್ದಿ ಚಾನೆಲ್‌ಗೆ ಸಂದರ್ಶನ ನೀಡಿ, ಕುಡುಕರನ್ನು ಸಾರ್ವಜನಿಕವಾಗಿ ಥಳಿಸಿ ಅವಮಾನಗೊಳಿಸುವುದರಿಂದ ಕುಡಿತದ ಕೆಟ್ಟ ಹವ್ಯಾಸದಿಂದ ಹೊರಬರಬಹುದು ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಏತನ್ಮಧ್ಯೆ, ಕುಡಿತದ ಚಟವಿರುವ ವ್ಯಕ್ತಿಗಳಿಗೆ ಮೊದಲು ಎಚ್ಚರಿಕೆಯನ್ನು ನೀಡಬೇಕು. ನಂತರ ಕುಡಿತದ ಚಟ ಮುಂದುವರಿಸಿದಲ್ಲಿ ಇಂತಹ ಕ್ರಮಕ್ಕೆ ಮುಂದಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಲೇಗಣ್ ಸಿದ್ಧಿ ಗ್ರಾಮವನ್ನು ಕುಡುಕರಿಂದ ಇದೇ ರೀತಿ ಮುಕ್ತಗೊಳಿಸಲಾಗಿದೆ. ಗ್ರಾಮದ ನಾಲ್ಕು ವ್ಯಕ್ತಿಗಳು ಕುಡಿತದ ದಾಸರಾಗಿದ್ದರು. ಆರಂಭದಲ್ಲಿ ಕೆಲ ಬಾರಿ ಎಚ್ಚರಿಕೆ ನೀಡಲಾಯಿತು. ಆದರೂ ಕುಡಿತದ ಚಟವನ್ನು ಮುಂದುವರಿಸಿದ್ದರಿಂದ ಅಂತಹ ವ್ಯಕ್ತಿಗಳನ್ನು ದೇವಾಲಯದ ಬಳಿ ಎಳೆದು ತಂದು ಮತ್ತೊಮ್ಮೆ ಕುಡಿಯುವುದಿಲ್ಲ ಎಂದು ವಾಗ್ದಾನ ಪಡೆಯಲಾಯಿತು. ನಂತರವೂ ಮುಂದುವರಿಸಿದ ವ್ಯಕ್ತಿಗಳನ್ನು ದೇವಾಲಯದ ಬಳಿಯಿರುವ ಕಂಬಕ್ಕೆ ಕುಡುಕರನ್ನು ಕಟ್ಟಿ ಥಳಿಸಲಾಯಿತು. ಇದೀಗ ಕುಡಿತದ ಚಟದಿಂದ ಮುಕ್ತರಾಗಿದ್ದಾರೆ ಎಂದು ತಿಳಿಸಿದ್ದಾರೆ. ಅಣ್ಣಾ ಹಜಾರೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಪಕ್ಷದ ವಕ್ತಾರ ಮನೀಷ್ ತಿವಾರಿ, ಶರಿಯಾ ಕಾನೂನು ಪಾಲಿಸದ ವ್ಯಕ್ತಿಗಳ ವಿರುದ್ಧ ತಾಲಿಬಾನ್ ಶಿಕ್ಷೆ ನೀಡಿದಂತಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
No comments:
Post a Comment