ಬೆಂಗಳೂರು, ಅ. 20 : 'ನಮ್ಮ ಮೆಟ್ರೋ' ಹುಟ್ಟುಹಬ್ಬವನ್ನು ಬೆಂಗಳೂರಿನ ಉತ್ಸಾಹಿ ನಾಗರಿಕರು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ದಿನಗೂಲಿ ಕೆಲಸದವರಿಂದ ಹಿಡಿದು ತಿಂಗಳಿಗೆ ಲಕ್ಷಲಕ್ಷ ಸಂಬಳವನ್ನು ಜೇಬಿಗಿಳಿಸುವವರಿಂದ ನಮ್ಮ ಮೆಟ್ರೋ ಮುದ್ದಾಡಿಸಿಕೊಂಡಿದೆ. ನಮ್ಮ ಮೆಟ್ರೋ ಎಂಬ ಹೆಸರಿಟ್ಟುಕೊಂಡಿರುವ ಮುದ್ದಾದ ಮಗುವನ್ನು ಈಗ ಜತನದಿಂದ ಕಾಪಾಡುವ ಜವಾಬ್ದಾರಿಯೂ ನಾಗರಿಕರ ಮೇಲೆಯೇ ಇದೆ. ಆಗ ಬರುತ್ತೆ ಈಗ ಬರುತ್ತೆ ಎಂದು ಕಾದಿದ್ದ ನಮ್ಮ ಮೆಟ್ರೋ ಜನ್ಮಪಡೆದಿದೆ. ಸರಿಯಾಗಿ ಅಕ್ಟೋಬರ್ 20ರ ಎಳೆಸಂಜೆ 4 ಗಂಟೆಗೆ ಸಾರ್ವಜನಿಕರನ್ನು ಮಹಾತ್ಮಾ ಗಾಂಧಿ ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ ಓಡಾಡಿಸಿದ ರೈಲಿನ ಪ್ರಯಾಣದ ಅನುಭವವನ್ನು ಕೆಲಪದಗಳಲ್ಲಿ ಹಿಡಿದಿಡುವುದು ಅಸಾಧ್ಯ. ರೈಲಿನಲ್ಲಿ ಹೋಗುತ್ತಿದ್ದೇವೆಯೋ ವಿಮಾನದಲ್ಲಿ ಕುಳಿತು ಆಗಸದಲ್ಲಿ ಹಾರಾಡುತ್ತಿದ್ದೇವೆಯೋ ಎಂಬ ಸಂದೇಹ. ಒಟ್ಟಿನಲ್ಲಿ ಪ್ರಯಾಣಿಕರ ಕಾಲುಗಳಂತೂ ನೆಲದ ಮೇಲಿರಲಿಲ್ಲ.ರೈಲು ಹತ್ತಿದ ಕೂಡಲೆ ಕೇಕೆ ಹಾಕಿ ಸಂತಸ ವ್ಯಕ್ತಪಡಿಸುತ್ತಿದ್ದ ಹದಿಹರೆಯದ ಕಾಲೇಜು ಹುಡುಗಿಯರು, ಶಾಲೆಗೆ ಚಕ್ಕರ್ ಹಾಕಿ ಮೆಟ್ರೋ ಪ್ರಯಾಣದ ಅನುಭವ ಅನುಭವಿಸಲು ಬಂದ ಶಾಲಾ ಮಕ್ಕಳು, ಹೆಗಲ ಮೇಲೆ ಟವೆಲ್ ಹಾಕಿಕೊಂಡು ಬಸ್ ಪ್ರಯಾಣಕ್ಕೂ ಇದಕ್ಕೂ ವ್ಯತ್ಯಾಸವಿಲ್ಲ ಎಂಬಂತೆ ಕುಳಿತಿದ್ದ ಯಜಮಾನರು, ಕಬ್ಬನ್ ಪಾರ್ಕಲ್ಲಿ ಏಕೆ ನಮ್ಮ ಮೆಟ್ರೋದಲ್ಲೇ ಪ್ರಣಯ ನಿವೇದನೆಯಾಗಲಿ ಎಂದು ಬೆರಳಿಗೆ ಬೆರಳು ತಾಗಿಸುತ್ತಿದ್ದ ಯುವಪ್ರೇಮಿಗಳು, ಅಯ್ಯೋ ಹದಿನಾಕೇ ನಿಮಿಷದ ಪ್ರಯಾಣವಾ? ಅಂತ ನಿರಾಸೆ ತೋರಿದ ಚಿಗುರುಮೀಸೆಯ ಯುವಕ... ಎಲ್ಲ ಅಲ್ಲಿದ್ದರು.
No comments:
Post a Comment