Thursday, July 28, 2011

ಬೇವು ಗುಳಿಗೆ ಮತ್ತು ಸಿರಪ್ಪಿಗಿಂತ ಹೆಚ್ಚು ಒಳ್ಳೆಯದು

ಬೇವು ಎಂದರೆ ಎಲ್ಲರಿಗೂ ಚಿರಪರಿಚಿತ. ಅಬಾಲ ವೃದ್ಧರಾದಿಗೂ ಇದು ಉಪಯೋಗಕ್ಕೆ ಬರುವ ವಸ್ತು. ಇದರಲ್ಲಿರೊ ಔಷಧೀಯ ಅಂಶವನ್ನ ಎಲ್ಲಾ ಸೌಂದರ್ಯ ಸಾಮಾಗ್ರಿ ಮತ್ತು ಔಷಧಗಳಲ್ಲಿ ಬಳಕೆ ಮಾಡೇ ಇರ್ತಾರೆ. ಈ ಆಯುರ್ವೇದ ಔಷಧೀಯ ಸಸ್ಯ ಎಲ್ಲಾ ತರಹದ ತ್ವಚೆ ಮತ್ತು ಕೂದಲಿನ ಸಮಸ್ಯೆಗೂ ಪರಿಹಾರ ಒದಗಿಸಲು ಉಪಯೋಗ. ಅಷ್ಟೇ ಅಲ್ಲದೆ ರಕ್ತ ಶುದ್ಧೀಕರಣ ಮಾಡುವ ಇದರ ವಿಶೇಷ ಗುಣ ಇದರ ಬಳಕೆಯನ್ನ ದ್ವಿಗುಣಗೊಳಿಸಿದೆ.

ಬೇವನ್ನು ಚರ್ಮದ ರಕ್ಷಣೆಗೆ ಹೆಚ್ಚು ಬಳಸುತ್ತಿದ್ದು, ಇದನ್ನು ಸೌಂದರ್ಯ ಸಾಮಾಗ್ರಿಗಳಲ್ಲಿ ಮಾತ್ರವಲ್ಲದೆ ಹಾಗೆಯೂ ನೇರವಾಗಿ ಸೇವಿಸುವ ಪರಿ ಇದೆ. ಇದರಲ್ಲಿನ ರೋಗ ಪ್ರತಿರೋಧಕ ಶಕ್ತಿಯನ್ನು ಬಳಸಿಕೊಂಡು ಅನೇಕ ಉಪಯೋಗಗಳನ್ನು ಪಡೆಯಬಹುದು. ಬೇವನ್ನು ಉಪಯೋಗಿಸಿಕೊಂಡು ನಿಮ್ಮ ಚರ್ಮದ ರೋಗಕ್ಕೆ ವಿದಾಯ ಹೇಳಬಹುದು.

ಬೇವಿನಿಂದ ಚರ್ಮವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ಇಲ್ಲಿ ತಿಳಿಯೋಣ:

* ಬೇವಿನ ಎಲೆಗಳನ್ನು ಬೆರೆಸಿದ್ದ ನೀರಿನಿಂದ ಮುಖ ತೊಳೆದುಕೊಳ್ಳುವುದರಿಂದ ತ್ವಚೆಯಲ್ಲಿನ ತುರಿಕೆಯನ್ನು ಕಡಿಮೆಮಾಡಬಹುದು. ಇದು ಕೆಂಪು ಕಲೆಗಳನ್ನು ಕ್ರಮೇಣವಾಗಿ ಕಡಿಮೆಗೊಳಿಸುತ್ತದೆ.

* ಮುಖದಲ್ಲಿ ಹೆಚ್ಚು ಮೊಡವೆಗಳಾಗಿದ್ದರೆ ಚಿಂತಿಸಬೇಡಿ, ಬೇವನ್ನು ಪೇಸ್ಟ್ ಮಾಡಿಕೊಂಡು ಮೊಡವೆಯ ಮೇಲೆ ಲೇಪಿಸಿ, ಆಗ ಅದು ಬೇಗ ವಾಸಿ ಹೊಂದುವುದಲ್ಲದೆ ತ್ವಚೆಯನ್ನು ಕೋಮಲಗೊಳಿಸುತ್ತದೆ ಮತ್ತು ನೈಸರ್ಗಿಕವಾಗಿ ಕಾಂತಿ ವೃದ್ಧಿಸುವಂತೆ ಮಾಡುತ್ತದೆ.

* ತ್ವಚೆಯಲ್ಲಿನ ಯಾವುದೇ ತರಹದ ಕಜ್ಜಿ, ಗುಳ್ಳೆ, ಅಲರ್ಜಿಗಳಿಗೆ ಇದು ಸೂಕ್ತ ಮದ್ದು. ಹುಣ್ಣು ಮತ್ತು ತುರಿಕೆ ಇದ್ದ ಪಕ್ಷದಲ್ಲಿ ಇದನ್ನು ದಿನಕ್ಕೆ ಎರಡು ಬಾರಿ ಹಚ್ಚುತ್ತಾ ಬಂದರೆ ತುರಿಕೆ ಮಾಯವಾಗುತ್ತದೆ.

* ಎಣ್ಣೆ ಮತ್ತು ಒಣ ಚರ್ಮ ಎರಡೂ ತರಹದ ಚರ್ಮಕ್ಕೆ ಇದು ಹೊಂದಿಕೊಳ್ಳುತ್ತದೆ. ಬೇವು ತುಂಬಾ ಪರಿಣಾಮಕಾರಿಯಾದ ಫೇಸ್ ವಾಶ್ ಎಂದರೆ ತಪ್ಪಾಗುವುದಿಲ್ಲ.
.
* ಮೊಡವೆಗಳಿಂದ ಹಳೆಯ ಕಲೆಗಳು ಹಾಗೆಯೇ ಮುಖದಲ್ಲಿ ಉಳಿದುಕೊಂಡಿದ್ದರೆ ಬೇವನ್ನು ಹಚ್ಚುತ್ತಾ ಬನ್ನಿ, ಆಗ ಕ್ರಮೇಣ ಮೊಡವೆ ಕಡಿಮೆಯಾಗುವುದಲ್ಲದೆ, ಮುಂದೆ ಮೊಡವೆಗಳು ಬರುವುದನ್ನೂ ತಡೆಯುತ್ತದೆ. ಚರ್ಮ ಶುಭ್ರವಾಗಿ ಕಾಣುವಂತೆ ಮಾಡುತ್ತದೆ ಅಲ್ಲದೆ ಜಡ್ಡು ಹಿಡಿದು ಕೂತಿದ್ದ ಕಪ್ಪು ಕಲೆಗೆ ವಿದಾಯ ಹೇಳುತ್ತದೆ.

No comments:

Post a Comment