ಫೆ 18: ಗೌರಿಬಿದನೂರು ಸೇಂಟ್ ಆನ್ಸ್ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿರುವ ಆರುವರ್ಷದ ಬಾಲಕ ರವಿತೇಜಾ, ಶಾಲೆಯ ಮುಖ್ಯೋಪಾಧ್ಯಾಯಿನಿ ನಡೆಸಿದ ಅಮಾನವೀಯ ಮತ್ತು ಪೈಶಾಚಿಕ ಕೃತ್ಯಕ್ಕೆ ತನ್ನ ಕಣ್ಣನ್ನೇ ಕಳೆದುಕೊಂಡ ಅತ್ಯಂತ ನೋವಿನ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ವೆಂಕಟಾಚಲಪತಿ ಮತ್ತು ಪೂರ್ಣಿಮಾ ದಂಪತಿಗೆ ಇರುವ ಏಕೈಕ ಪುತ್ರ ರವಿತೇಜಾ. ಸೇಂಟ್ ಆನ್ಸ್ ಶಾಲೆಯಲ್ಲಿ ಆಡಳಿತ ಮಂಡಳಿ ವಿದ್ಯಾರ್ಥಿಗಳಿಂದ ದೇಣಿಗೆ ಪಡೆದು ಕ್ರಿಸ್ಮಸ್ ಹಬ್ಬ ಆಚರಿಸಲು ನಿರ್ಧರಿಸಿದ್ದರು. ಆದರೆ ಎಲೆಕ್ಟ್ರಿಕಲ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಈತನ ತಂದೆ ದೇಣಿಗೆ ನೀಡಲು ನಿರಾಕರಿಸಿದರು. ಇಷ್ಟಕ್ಕೆ ಶಿಕ್ಷಕಿ ಅಸ್ತಯಾ ಡಿಸೆಂಬರ್ 16 ರಂದು ವಿದ್ಯಾರ್ಥಿಯನ್ನು ಮುಖ್ಯ ಶಿಕ್ಷಕಿ ಮೇರಿ ವಿನಿತಾ ಬಳಿ ಕರೆದುಕೊಂಡು ಹೋದರು. ನಾಲ್ಕು ತಾಸುಗಳ ಕಾಲ ವಿದ್ಯಾರ್ಥಿಯನ್ನು ಮುಖ್ಯ ಶಿಕ್ಷಕಿ ಕೊಠಡಿಯಲ್ಲಿ ನಿಲ್ಲಿಸಿದ್ದಾರೆ. ಶಿಕ್ಷೆ ತಾಳಲಾರದೆ ರವಿತೇಜಾ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಮೇರಿ ವಿನಿತಾ ಈತನ ಕಣ್ಣಿನ ಮೇಲೆ ಪೆನ್ಸಿಲ್ ನಿಂದ ಬಲವಾಗಿ ಚುಚ್ಚಿದ್ದಾಳೆ. ಚುಚ್ಚಿದ ರಭಸಕ್ಕೆ ರವಿತೇಜನ ಕಣ್ಣುಗುಡ್ಡೆ ಸೀಳಿ ಹೋಗಿದೆ. ಪೋಷಕರಿಗೆ ವಿಷಯ ತಿಳಿಸದೇ ಶಾಲೆಯ ಸಿಬಂದಿ ವಿದ್ಯಾರ್ಥಿಯನ್ನು ಮಿಂಟೋ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮಗು ಇನ್ನೂ ಮನೆಗೆ ಬಾರದಿರುವುದರಿಂದ ಗಾಭರಿಗೊಂಡ ಪೋಷಕರಿಗೆ ಆನಂತರ ಶಾಲೆಯವರು ವಿಷಯ ತಿಳಿಸಿದ್ದಾರೆ. ಮಗನನ್ನು ನೋಡಲು ಹೆತ್ತ ಕರುಳು ಓಡೋಡಿ ಬೆಂಗಳೂರು ಮಿಂಟೋ ಆಸ್ಪತ್ರೆಗೆ ಬಂದಾಗ ಶಾಲೆಯವರು ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ವೆಚ್ಚವನ್ನು ಭರಿಸುವ ಭರವಸೆ ಕೂಡಾ ನೀಡಿದ್ದಾರೆ. ಎಲೆಕ್ಟ್ರಿಕ್ ಕೆಲಸ ಮಾಡುವ ರವಿತೇಜಾ ತಂದೆ ಇದ್ದಬದ್ದ ಹಣವನ್ನು ಖರ್ಚು ಮಾಡಿ ಮಗನಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಮಿಂಟೋ ಆಸ್ಪತ್ರೆಯ ವೈದ್ಯರು ರವಿತೇಜಾನಿಗೆ ಮತ್ತೆ ಕಣ್ಣು ದೃಷ್ಟಿ ಬರುವ ಖಚಿತ ಭರವಸೆ ನೀಡುತ್ತಿಲ್ಲ. ಇದೇ ಬರುವ ಮಂಗಳವಾರ (ಫೆ 28) ಮತ್ತೊಮ್ಮೆ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ ಎಂದು ರವಿತೇಜಾ ಪೋಷಕರು ಉದಯವಾಣಿ ದಿನಪತ್ರಿಕೆಯಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
No comments:
Post a Comment