ಮನೆಗೆ ನೆಂಟರಿಷ್ಟರು ಬಂದಾಗ ಎಲ್ಲಕ್ಕಿಂತ ಮೊದಲು ಗಮನಿಸುವುದು ಅಡುಗೆಮನೆಯನ್ನು ಎಷ್ಟು ಚೊಕ್ಕವಾಗಿ ಇಟ್ಟುಕೊಂಡಿದ್ದೀರೆಂದು. 'ಚಿಕ್ಕದಾಗಿದ್ರೂ ಪರವಾಗಿಲ್ಲ, ನೀಟಾಗಿ ಇಟ್ಕೊಂಡಿದ್ದೀರಿ' ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅದೇ ಅಸ್ತವ್ಯಸ್ತವಾಗಿದ್ದರೆ, ಮುಖ ಸೊಟ್ಟಗೆ ಮಾಡಿ ನಮ್ಮದೇ ಎಷ್ಟೋ ಚೆನ್ನಾಗಿದೆ ಎಂದು ದೇಶಾವರಿ ನಗೆ ನಗುತ್ತಾರೆ.
ಚೊಕ್ಕ ಅಡುಗೆಮನೆಗೆ ಸಿಗುವ ಮೆಚ್ಚುಗೆ ಗೃಹಿಣಿಗೆ ಸಿಗುವ ಅತ್ಯುತ್ತಮ ಸರ್ಟಿಫಿಕೇಟುಗಳಲ್ಲೊಂದು. ಅಡುಗೆಮನೆಯನ್ನು ಒಪ್ಪಓರಣವಾಗಿ ಇಟ್ಟುಕೊಳ್ಳುವುದು ಮಾತ್ರವಲ್ಲ, ಯಾವುದೇ ಅವಘಡ ಸಂಭವಿಸದಂತೆ ಎಚ್ಚರಿಕೆ ವಹಿಸುವುದು ಕೂಡ ಗೃಹಿಣಿಯ ಅಥವಾ ಗಂಡನ ಪ್ರಾಥಮಿಕ ಕರ್ತವ್ಯಗಳಲ್ಲೊಂದು. ನಮಗೇ ಗೊತ್ತಿಲ್ಲದಂತೆ ಸಂಭವಿಸುವ ಅನೇಕ ಸಣ್ಣಪುಟ್ಟ ಅವಘಡಗಳನ್ನು ತಪ್ಪಿಸುವುದು ಈ ಎಚ್ಚರಿಕೆಯಿಂದ ಸಾಧ್ಯ.
ಆ ಎಚ್ಚರಿಕೆಗಳು ಯಾವುವು?
* ಹಸಿ ಕೈಯಿಂದಲೇ ಅನೇಕ ವಸ್ತುಗಳನ್ನು ಮುಟ್ಟುವ ಅಭ್ಯಾಸ ಕೆಲವರಿಗಿರುತ್ತದೆ. ಕೈ ನೀಟಾಗಿ ಒರೆಸಿಕೊಂಡು ಮುಂದಿನ ಕೆಲಸಕ್ಕೆ ಅಣಿಯಾದರೆ, ಉಪ್ಪಿನಕಾಯಿಯಂಥ ವಸ್ತು ಕೆಡುವುದು, ವಿದ್ಯುತ್ ಶಾಕ್ ಹೊಡೆಯದಿರುವುದನ್ನು ತಪ್ಪಿಸಬಹುದು. ಅದಕ್ಕೊಂದು ಒಣ ಬಟ್ಟೆ ಇಟ್ಟುಕೊಳ್ಳಿ. ಸೀರಿಗೆ ಕೈಯೊರೆಸುವುದು ಕೆಟ್ಟಚಾಳಿ.
* ಅಡುಗೆ ಮಾಡಿದ ನಂತರ ಪಾತ್ರೆ ಬಿಸಿಯಾಗಿರುವಾಗ ಮಕ್ಕಳ ಕೈಗೆ ಸಿಗದಂತೆ ಎತ್ತಿಡಿ. ತಿಳಿಯದೇ ಮುಟ್ಟಿದಾಗ ಪುಟ್ಟ ಕೈಗಳು ಸುಟ್ಟುಹೋದಾವು ಎಚ್ಚರ.
* ಹಾಗೆಯೇ, ಚಾಕು, ಫೋರ್ಕ್, ಕತ್ತರಿ ಮುಂತಾದ ಚೂಪಾದ ಸಾಮಗ್ರಿಗಳು ಮಕ್ಕಳ ಕೈಗೆ ಸಿಗದಂತೆ ಎಚ್ಚರವಹಿಸಿ. ಅದರಲ್ಲೂ ಪುಟಾಣಿಗಳ ಲಕ್ಷ್ಯ ಇಂಥ ವಸ್ತುಗಳೆಗೇ ಇರುತ್ತದೆ.
* ತರಕಾರಿ ಸಿಪ್ಪೆ ತೆಗೆಯುವ ಸಾಧನವನ್ನು ಆಗಾಗ ಬದಲಿಸುತ್ತಿರಿ. ಅತ್ಯುತ್ತಮ ಸ್ಟೀಲಿನದು ಆಗಿರದಿದ್ದರೆ ಜಂಗು ಹಿಡಿದಿರುತ್ತದೆ. ಇಂಥವುಗಳನ್ನು ಬಳಸಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.
* ದೋಸೆ ಮಾಡುವ ನಾನ್ ಸ್ಟಿಕ್ ತವಾ, ಚಪಾತಿ ಮಾಡುವ ಹೆಂಚು ಬಹಳ ದಿನಗಳಿಂದ ಉಪಯೋಗಿಸುತ್ತಿದ್ದರೆ ಬದಲಿಸುವುದು ಒಳಿತು. ಅದರಲ್ಲೂ ಕಾದಾಗ ಅಂಚಿನಲ್ಲಿ ಗುಳ್ಳೆಗಳು ಬರುತ್ತಿದ್ದರೆ ಅದನ್ನು ಬದಲಿಸಿ ಹೊಸದನ್ನು ಕೊಳ್ಳುವುದು ನಿಮ್ಮ ಆದ್ಯ ಕರ್ತವ್ಯ.
* ನೆಲದ ಮೇಲೆ ಹಾಲು, ಎಣ್ಣೆಯಂಥ ಪದಾರ್ಥಗಳು ಚೆಲ್ಲಿದಾಗ ಎಲ್ಲ ಕೆಲಸ ಬಿಟ್ಟು ಜಿಡ್ಡು ಹೋಗುವ ಹಾಗೆ ನೆಲ ಒರೆಸಿರಿ. ಹಿರಿಜೀವಗಳು ಅಥವಾ ಪುಟ್ಟ ಮಕ್ಕಳು ಓಡಾಡುವಾಗ ಜಾರಿ ಬಿದ್ದಾರು. ಇಂಥ ಪದಾರ್ಥಗಳು ಚೆಲ್ಲಿದಾಗ ಮೊದಲೇ ಎಚ್ಚರಿಸುವುದು ಜಾಣತನ.
* ಅಡುಗೆ ಮಾಡುವಾಗ ಫೋನ್ ಕಾಲ್ ತೆಗೆದುಕೊಳ್ಳುವುದು ಅಥವಾ ಟಿವಿಯನ್ನು ನೋಡುವುದು ಜಾಣ ಗೃಹಿಣಿಯ ಲಕ್ಷಣವಲ್ಲ. ಮೈಮರೆತಾಗ ಏನಾದರೂ ಸಂಭವಿಸಿದರೆ ಅದಕ್ಕೆ ಕಾರಣ ನೀವೇ ಆಗುತ್ತೀರಿ.
* ಎಲ್ಲಕ್ಕಿಂತ ಮಹತ್ವದ್ದೆಂದರೆ, ರಾತ್ರಿ ಮಲಗುವಾಗ ಅಥವಾ ಮನೆಯಿಂದ ಹೊರಗೆ ಹೋಗುವಾಗ ಗ್ಯಾಸ್ ನಾಬ್ ಅನ್ನು ಆಫ್ ಮಾಡಿ ಹೋಗಿರಿ.
No comments:
Post a Comment