Wednesday, November 30, 2011

ಅಣ್ಣಾ ಹಜಾರೆ ಉನ್ನತ ಚಿಂತಕ: ಅಮೆರಿಕದಿಂದ ಜಗಜ್ಜಾಹೀರು!







ವಾಷಿಂಗ್ಟನ್‌, ನ.30: ಭಾರತದಲ್ಲೂ ಉನ್ನತ, ಉದಾತ್ತ ಚಿಂತಕರಿದ್ದಾರೆ ಎಂಬ ತಾಜಾ ಸುದ್ದಿಯನ್ನು ಅಮೆರಿಕದ ಪತ್ರಿಕೆ ಪ್ರಕಟಿಸಿದೆ. ಅದರಲ್ಲೂ ಇತ್ತೀಚೆಗೆ ಭ್ರಷ್ಟಾಚಾರದ ವಿರುದ್ಧ ಒಂದೇ ಸಮನೆ ಮಾತನಾಡುತ್ತಾ, ಜನರಲ್ಲಿ ಲಂಚದ ವಿರುದ್ಧ ಜಾಗೃತಿ ಮಾಡಿಸುತ್ತಿರುವ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಅವರು ಜಗತ್ತಿನ 100 ಮಂದಿ ಉನ್ನತ ಚಿಂತಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಭಾರತದ ಕೋಟಿ ಕೋಟಿ ಜನರ ಹಿರಿಯಣ್ಣನಾಗಿ ಹೊರಹೊಮ್ಮಿರುವ ಅಣ್ಣಾ ಹಜಾರೆ ಸದ್ಯದಲ್ಲೇ ಮತ್ತೊಂದು ಸುತ್ತಿನ ಉಪವಾಸಕ್ಕೆ ಕುಳಿತುಕೊಳ್ಳುತ್ತಿರುವ ಸಂದರ್ಭದಲ್ಲಿ ಅವರನ್ನು ಜಗತ್ತಿನ 37ನೇ ಚಿಂತಕ ಎಂದು ಗುರುತಿಸಿರುವುದು ಸ್ತುತ್ಯರ್ಹವಾಗಿದೆ. ಅಮೆರಿಕದ ಫಾರಿನ್‌ ಪಾಲಿಸಿ ಮ್ಯಾಗಜಿನ್‌ ತಯಾರಿಸಿರುವ ವಿಶ್ವದ 100 ಮಂದಿ ಉನ್ನತ ಚಿಂತಕರ ಪಟ್ಟಿಯಲ್ಲಿ ಸಾಫ್ಟ್ ವೇರ್ ದಿಗ್ಗಜ, ಬೆಂಗಳೂರಿನ ಅಜೀಂ ಪ್ರೇಮ್‌ಜಿ ಹಾಗೂ ಇತರೆ ಮೂವರು ಭಾರತೀಯರೂ ವಿಶ್ವದ ನೂರು ಚಿಂತಕರು ಎನಿಸಿಕೊಂಡಿದ್ದಾರೆ. ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರು 11 ನೇ ಸ್ಥಾನ ಪಡೆದಿದ್ದಾರೆ. ಲೇಖಕಿ ಹಾಗೂ ಸಮಾಜ ಸೇವಾ ಕಾರ್ಯಕರ್ತೆ ಅರುಂಧತಿ ರಾಯ್‌, ಬಡತನ ನಿವಾರಣೆ ಸಂಶೋಧಕಿ ದೀಪಾ ನಾರಾಯಣನ್‌ ಹಾಗೂ ಅರ್ಥಶಾಸ್ತ್ರಜ್ಞ ಅರವಿಂದ ಸುಬ್ರಹ್ಮಣ್ಯನ್‌ ಅವರು ಸಹ ವಿಶ್ವದ 100 ಮಂದಿ ಉನ್ನತ ಚಿಂತಕರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ವರ್ಷಾರಂಭದಲ್ಲಿ ಅರಬ್‌ ರಾಷ್ಟ್ರಗಳಲ್ಲಿ ಕಾಣಿಸಿಕೊಂಡ ದಂಗೆ ಪಟ್ಟಿ ತಯಾರಿಯಲ್ಲಿ ಸಾಕಷ್ಟು ಪ್ರಭಾವ ಬೀರಿದೆ. ಪ್ರಥಮ 9 ಸ್ಥಾನಗಳು ಅರಬ್‌ ದಂಗೆಯಿಂದ ಪ್ರೇರಿತಗೊಂಡಿವೆ. ಈ ಸ್ಥಾನಗಳು ಅರಬ್‌ ಕ್ರಾಂತಿವೀರರ ಪಾಲಾಗಿದೆ. ಅಜೀಂ ಪ್ರೇಮ್‌ಜಿ ಅವರು ಪಟ್ಟಿಯಲ್ಲಿ 14ನೇ ಸ್ಥಾನ ಪಡೆದುಕೊಂಡಿದ್ದಾರೆ. ಬಿಲ್‌ ಹಾಗೂ ಮೆಲಿಂದಾ ಗೇಟ್ಸ್‌ ಅವರಿಗಿಂತ ಕೆಳ ಸ್ಥಾನವನ್ನು ಪ್ರೇಮ್‌ಜಿ ಪಡೆದು ಕೊಂಡಿದ್ದಾರೆ. ಜಾಗತಿಕ ಅರ್ಥಶಾಸ್ತ್ರಜ್ಞ ಅರವಿಂದ ಸುಬ್ರಹ್ಮಣ್ಯನ್‌ ಅವರು 97ನೇ ಸ್ಥಾನ ಪಡೆದುಕೊಂಡಿದ್ದರೆ. ದೀಪಾ ನಾರಾಯಣ್‌ ಅವರು 79ನೇ ಸ್ಥಾನದಲ್ಲಿದ್ದಾರೆ.






No comments:

Post a Comment