ಬೆಂಗಳೂರು: ಹೆಡ್ಡಿಂಗ್ ನೋಡಿದ್ದೇ ತಡ ಪಿಲ್ಲೊ ಮೇಲೆ ಹೆಡ್ ಇಟ್ಟು ನಿದ್ದೆಗೆ ಜಾರಿದಿರಾ!? ಸರಿ ಬಿಡಿ. ನಿಮ್ಮ ಕನಸಿಗೆ ಬಂದಾದರೂ ವಿಷಯ ಏನು ಅಂತ ಹೇಳ್ತೀನಿ. ಏನಪಾ ಅಂದರೆ ರಕ್ತದೊತ್ತಡ ಇದೆ ಅಂತ್ಲೇ ಮಂದಿ ಇತ್ತಿತ್ಲಾಗೆ ಅದರ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅಂಥಾದ್ದರಲ್ಲಿ ಒಂದಷ್ಟೊತ್ತು ಆರ್ರಾಮಾಗಿ ನಿದ್ದೆ ಮಾಡಿ ಬ್ಲಡ್ ಪ್ರಷರ್ ನಿಯಂತ್ರಿಸಿಕೊಳ್ಳಬಹುದು ಎಂದಾದರೆ ವೈದ್ಯ ಹೇಳಿದ್ದೂ ಅದನ್ನೇ ರೋಗಿ ಕೇಳಿದ್ದೂ ಅದ್ನೇ...ಅನ್ನುವಂತಾಗುತ್ತದೆ.
ದಿನದ ವೇಳೆ ಸ್ವಲ್ಪೊತ್ತು ಆರಾಮಾಗಿ (ನಿಶ್ಚಿಂತೆಯಿಂದ) ಮಲಗಿದರೆ ರಕ್ತದೊತ್ತಡವನ್ನು ನಿದ್ದೆಗೆ ತಕ್ಕಂತೆ ನಿಯಂತ್ರಿಸಬಹುದು ಎನ್ನುತ್ತಿದೆ ಅಧ್ಯಯನವೊಂದು. ಏನಿಲ್ಲ ಡೇ ಟೈಂನಲ್ಲಿ ಕನಿಷ್ಠ 45 ನಿಮಿಷ ತಾಚಿ ಮಾಡಿ ನಿಮ್ಮ ಹೃದಯ ಹೆಚ್ಚು ಘಾಸಿಕೊಳ್ಳದೆ ರಕ್ತದೊತ್ತಡವನ್ನು ತನ್ನಷ್ಟಕ್ಕೆ ತಾನೇ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಅಷ್ಟರಮಟ್ಟಿಗೆ ಅದೂ (ಹೃದಯವೂ) ಸುರಕ್ಷಿತವಾಗಿರುತ್ತದೆ.
ನಿದ್ದೆಯಿಂದ ರಕ್ತದೊತ್ತಡ ನಿಯಂತ್ರಣ: ವಿದೇಶದಲ್ಲಿನ ವಿಶ್ವವಿದ್ಯಾಲಯವೊಂದರ 85 ವಿದ್ಯಾರ್ಥಿಗಳನ್ನು ಎರಡು ತಂಡಗಳಲ್ಲಿ ಬೇರ್ಪಡಿಸಿ ಒಂದು ತಂಡಕ್ಕೆ ಒಂದು ಗಂಟೆ ಕಾಲ ನಿದ್ದೆ ಮಾಡಲು ಹೇಳಲಾಯಿತು. ಮತ್ತೊಂದು ತಂಡಕ್ಕೆ ನಿದ್ದೆಗೆ ಅವಕಾಶ ನೀಡಲೇ ಇಲ್ಲ. ಆದರೆ ಎಲ್ಲ ವಿದ್ಯಾರ್ಥಿಗಳಿಗೂ ಮಾನಸಿಕ ಒತ್ತಡವನ್ನು ಪರೀಕ್ಷಾರ್ಥವಾಗಿ ನೀಡಲಾಗಿತ್ತು.
ಆರಂಭದಲ್ಲಿ ಎಲ್ಲರ ಹೃದಯ ಬಡಿತ ಜೋರಾಗಿಯೇ ಇತ್ತು. ಆದರೆ ಕ್ರಮೇಣ ನಿದ್ದೆಗೆ ಜಾರಿದವರ ರಕ್ತದೊತ್ತಡ ತಹಬಂದಿಗೆ ಬರತೊಡಗಿತು. ಇನ್ನು ನಿದ್ದೆ ಮಾಡದ ವಿದ್ಯಾರ್ಥಿಗಳ ರಕ್ತದೊತ್ತಡ ಏರುಗತಿಯಲ್ಲೇ ಇತ್ತು! ನಿದ್ದೆಗೆಡುವ, ಅಷ್ಟೋ ಇಷ್ಟೋ ಹೃದಯ ರೋಗವಿರುವ ಮಂದಿ ಈಗ್ಲಿಂದಲೇ ಮಧ್ಯಾಹ್ನದ ವೇಳೆ ನಿದ್ದೆಗೆ ಜಾರುವುದು ಕ್ಷೇಮ. ಏನಂತೀರಿ!?
No comments:
Post a Comment