ಪುಟ್ಟ ಬಾಲಕ ಶ್ರೀರಾಮ ಅಂದು ಆಕಾಶದಲ್ಲಿರೋ ಹುಣ್ಣಿಮೆ ಚಂದ್ರನ ನೋಡಿ ಒಂದೆ ಸಮನೆ ಅಳತೊಡಗಿದ. ತಾಯಿ ಕೌಸಲ್ಯೆ ಬಳಿ ಬಂದು ಅದನ್ನು ತಂದುಕೊಡೆಂದು ರಚ್ಚೆ ಹಿಡಿಯತೊಡಗಿದ. ಎಷ್ಟು ರಮಿಸಿದರೂ ಮಗು ಸುಮ್ಮನಾಗಲಿಲ್ಲ. ಕೌಸಲ್ಯೆ ಕಂಗಾಲು. ಆಗ ಅಲ್ಲಿಗೆ ಬಂದ ಮಂಥರೆ ರಾಮನ ಕೈಗೆ ಕನ್ನಡಿಯೊಂದನ್ನು ನೀಡಿ "ನೋಡು ಇದರೊಳಗೆ ನಿನ್ನ ಚಂದ್ರ" ಅಂದಾಗ ಅಳುತ್ತಿದ್ದ ರಾಮ ಸುಮ್ಮನಾದನಂತೆ!
ಮಕ್ಕಳು ರಚ್ಚೆ ಹಿಡಿದರೆ ಇಂತಹ ಸುಲಭವಾದ ಟೆಕ್ನಿಕ್ ಬಳಸಬಹುದೆಂದು ಮಂಥರೆ ತ್ರೇತಾಯುಗದಲ್ಲಿಯೇ ಹೇಳಿಕೊಟ್ಟಿದ್ದಾಳೆ. ಆದರೆ ಈ ಕಲಿಯುಗದ ಮಕ್ಕಳನ್ನು ಸಂಭಾಳಿಸೋದು ಸುಲಭನಾ? ಕೆಲವು ಮಕ್ಕಳು ಅಪ್ಪ ಅಮ್ಮನಿಗೆ ವಿಧೇಯತೆ ತೋರುವುದನ್ನೇ ಮರೆಯುತ್ತಿದ್ದಾರೆ. ಏನಾದರೂ ಹೇಳಿದರೆ ದುರುಗಟ್ಟಿ ನೋಡುತ್ತಾರೆ. ಇಂಥವರಿಗೆ ವಿಧೇಯತೆ ಪಾಠ ಹೇಳೋದು ಹೇಗೆ?
ಮಕ್ಕಳು ಹಠ ಹಿಡಿದರೆ ಆಕಾಶ ಭೂಮಿ ಒಂದು ಮಾಡುತ್ತಾರೆ. ಹೆತ್ತವರಿಗೆ ಸಂಭಾಳಿಸೋದೇ ಕಷ್ಟವಾಗುತ್ತದೆ. ಮಕ್ಕಳನ್ನು ನಿಭಾಯಿಸುವುದು ತುಂಬಾ ಕಷ್ಟ ಅನ್ನೊದು ಹೆಚ್ಚಿನ ಅಮ್ಮಂದಿರ(ಅಪ್ಪಂದಿರದ್ದು ಕೂಡ) ಅಭಿಪ್ರಾಯ. ಕೆಲವರಿಗೆ ಕಚೇರಿಗೂ ಹೋಗಬೇಕಾಗುತ್ತದೆ. ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯಲಾಗುವುದಿಲ್ಲ. ಈ ನಡುವೆ ವಿಧೇಯತೆ ಪಾಠ ಹೇಳಿಕೊಡೋದು ಹೇಗೆ?
ಹೆಚ್ಚಿನ ಅಮ್ಮ ಅಥವಾ ಅಪ್ಪ ಮಕ್ಕಳಿಗೆ ವಿಧೇಯತೆ ಕಲಿಸುವಲ್ಲಿ ಸೋಲುತ್ತಾರೆ. ಆಮೇಲೆ ನಿಮ್ಮಿಂದಾಗಿಯೇ ಮಗು ಹಠ ಕಲಿತದ್ದು ಅಂತ ಗಂಡಹೆಂಡತಿ ಜಗಳವಾಡುತ್ತಾರೆ. ಮಗು ಹಠಮಾರಿಯಾಗಿ ಜೊತೆಗೆ ಅವಿಧೇಯತೆ ತೋರಿಸುತ್ತ ಬೆಳೆಯುತ್ತದೆ. ಮಕ್ಕಳಿಗೆ ದೈಹಿಕ ಹಿಂಸೆ ನೀಡದೆಯೇ ವಿಧೇಯತೆಯ ಪಾಠ ಹೇಳುವುದು ಅತ್ಯಂತ ಅಗತ್ಯ. ಇಲ್ಲಿ ಕೆಲವು ಟಿಪ್ಸ್ ಗಳಿವೆ. ಇದನ್ನು ಪಾಲಿಸಿದರೆ ಮಕ್ಕಳಲ್ಲಿ ಧೈರ್ಯವಾಗಿ "ಕೈ ಕಟ್ ಬಾಯ್ ಮುಚ್" ಅನ್ನಬಹುದು.
* ಮಗುವಿನ ವರ್ತನೆ ಅರಿತುಕೊಳ್ಳುವುದು ಮುಖ್ಯ. ಅವರಲ್ಲಿ ಏನಾದರೂ ಮಾಡಲು ಹೇಳಿದಾಗ ನಿಮ್ಮನ್ನು ದುರುಗಟ್ಟಿ ನೋಡುತ್ತವೆ. ಇದಕ್ಕೆ ಮೇಲ್ನೋಟಕ್ಕೆ ಕಾಣುವ ಕಾರಣವೆಂದರೆ ಮಗುವಿಗೆ ನೀವು ಹೇಳಿದ ಕೆಲಸ ಮಾಡಲು ಇಷ್ಟವಾಗದೇ ಇರುವುದು. ಇಂತಹ ಸಮಯದಲ್ಲಿ ಮಗುವಿನೊಂದಿಗೆ ಕುಳಿತುಕೊಂಡು, ನೀವು ಏನನ್ನು ಬಯಸುತ್ತೀರಿ ಅಂತೆಲ್ಲ ಪ್ರೀತಿಯಿಂದ ಮಗುವಿಗೆ ಅರ್ಥವಾಗುವ ಹಾಗೇ ತಾಳ್ಮೆಯಿಂದ ಬಿಡಿಸಿ ಹೇಳಿ. ಮಗು ನಿಧಾನವಾಗಿ ಅರ್ಥಮಾಡಿಕೊಳ್ಳುತ್ತದೆ.
* ಮಕ್ಕಳನ್ನು ನಿಮಗೆ ವಿಧೇಯರನ್ನಾಗಿಸೋದು ಸುಲಭದ ಕೆಲಸವೇನಲ್ಲ. ಅಪ್ಪ/ಅಮ್ಮ ಮಗುವಿಗೆ ವಿಧೇಯತೆಯ ಪಾಠ ಹೇಳಲು ಸರಿಯಾದ ಸ್ಥಳ ಮತ್ತು ಸಮಯವನ್ನು ಕಂಡುಕೊಳ್ಳಬೇಕು. ಮಕ್ಕಳಿಗೆ ಆಟದ ಮೂಲಕವೂ ವಿಧೇಯತೆ ಹೇಳಿಕೊಡಬಹುದು.
* ನೀವು ಮಕ್ಕಳಿಗೆ ವಿಧೇಯತೆಯ ಪಾಠ ಹೇಳಬಹುದು. ಆದರೆ ನೀವು ಹೇಳಿದ್ದೆಲ್ಲ ಮಗುವಿಗೆ ಅರ್ಥವಾಗಬೇಕಲ್ಲ. ಅರ್ಥವಾದರೂ ನೆನಪಿನಲ್ಲಿ ಉಳಿಯಬೇಕಲ್ಲ. ಮಕ್ಕಳು ಅವಿಧೇಯತೆ ತೋರಿಸಿದಾಗ ಒಮ್ಮೆಗೆ ತಾಳ್ಮೆ ಕಳೆದುಕೊಳ್ಳಬೇಡಿರಿ. ಮಕ್ಕಳು ಏನಾದರೂ ತಪ್ಪು ಮಾಡಿದಾಗ ಅಥವಾ ತಪ್ಪು ಹೇಳಿದಾಗ ಸಾವಧಾನವಾಗಿ, ತಾಳ್ಮೆಯಿಂದ ಒಳ್ಳೆಯ ಅಮ್ಮ ಅಥವಾ ಅಪ್ಪನಾಗಿ ತಿಳಿಹೇಳಿರಿ.
* ಮಕ್ಕಳಿಗೆ ವಿವಿಧ ಉದಾಹರಣೆಗಳನ್ನು ನೀಡುವ ಮೂಲಕ ನಿಮ್ಮ ವಿಧೇಯತೆ ಕಲಿಸಬಹುದು. ಒಂದಿಷ್ಟು ಅವರಿಗೆ ಅರ್ಥವಾಗುವಂತೆ ನೀತಿ ಪಾಠ ಹೇಳಿರಿ. ಮಕ್ಕಳೊಂದಿಗೆ ಕಳೆಯಲು ಒಂದಿಷ್ಟು ಸಮಯ ಮೀಸಲಾಗಿಡಿ. ನೀತಿ ಕತೆಗಳಿರುವ ಪುಸ್ತಕಗಳನ್ನು ಓದಲು ಕೊಡಿ ಅಥವಾ ನೀವೇ ಅದರಲ್ಲಿರುವ ಕಥೆಯನ್ನು ಆಸಕ್ತಿದಾಯಕವಾಗಿ ಹೇಳಿರಿ. ಇದರಿಂದ ಮಗು ಜೀವನದ ಮೌಲ್ಯಗಳನ್ನು ಸಹ ಕಲಿತುಕೊಳ್ಳುತ್ತದೆ.
* ಗುರು ಹಿರಿಯರಿಗೆ ಗೌರವಿಸುವುದನ್ನು ಹೇಳಿಕೊಡಿ. ಮಕ್ಕಳಿಗೆ ಹೆದರಿಸಿ ಹೇಳದಿರಿ. ಪ್ರೀತಿ, ತಾಳ್ಮೆ ಇರಲಿ. ಬೇರೆ ಮಕ್ಕಳಿಗೆ (ಕೆಲವೊಮ್ಮೆ ದೊಡ್ಡವರಿಗೂ) ಒದೆಯುವುದು, ಬೈಯುವುದು, ಒದೆಯುವುದು ಮಾಡುವುದು ತಪ್ಪೆಂದು ಹೇಳಿಕೊಡಿ. ಮಗು ಏನಾದರೂ ತಪ್ಪು ಮಾಡಿದರೆ ಅದನ್ನು ಒಪ್ಪಿಕೊಳ್ಳುವಂತೆ ಹೇಳಿಕೊಡಿ. ತಪ್ಪು ಒಪ್ಪು ಕೊಳ್ಳುವುದರಿಂದ ಘನತೆ ಹೆಚ್ಚುತ್ತದೆ ಎನ್ನಿ.
No comments:
Post a Comment